logo

ಚೈನಾ ಟೌನ್ ನಲ್ಲಿ ಚಿತ್ರಾನ್ನ ಸಿಗುತ್ತಾ?

ಚೈನಾ ಟೌನ್ ನಲ್ಲಿ ಚಿತ್ರಾನ್ನ ಸಿಗುತ್ತಾ?

 

ಇದೊಂಥರ ಎಲ್ಹೋದರೂ ಚೇಪಗೋಡಿನ ಚಿತ್ರಾನ್ನ ಹುಡುಕಿದ ಕಥೆ. ( ಚೇಪುಗೋಡು-ಶೃಂಗೇರಿ ಹತ್ತಿರದ ನನ್ನೂರು). ಹೇಳಿಕೊಳ್ಳುವಷ್ಟು ಅನ್ನಪ್ರಿಯಳೆನಲ್ಲದಿದ್ದರೂ, ಅದೇನೋ ಅಮ್ಮ ಮಾಡುವ ಸಿಂಪಲ್ ಒಗ್ಗರಣೆ ಚಿತ್ರಾನ್ನ ಅಂದರೆ ನಂಗೆ ಮೈಯ್ಯೆಲ್ಲಾ ಬಾಯಿ. ಇರಲಿ, ಈ ಚೈನಾಟೌನಿನ ಕಥೆ ಮೊದಲು ಹೇಳಿ ಬಿಡ್ತೀನಿ.

ನಮ್ಮ ಮದುವೆ ಆಗಿ ದಶಮಾನೋತ್ಸವ ಆಚರಿಸುವ ಪ್ರಸ್ತಾಪ ನಮ್ಮಿಬ್ಬರ ದ್ವಿಸದಸ್ಯ ಮಂಡಳಿ ( ಅದೇ ಗಂಡ -ಹೆಂಡತಿ, ನಾನು -ಅವನು ಕಮಿಟಿ )ಮುಂದೆ ಬಂದಿತ್ತು. ( ಇನ್ನೇನು ಮತ್ತೆ, ಊರುಸುತ್ತೋಕೆ ಯಾವ ನೆವ ಆದ್ರೇನು ಅಲ್ವ?) ನಾವಿಬ್ರು ಎಷ್ಟು ಕಿತ್ತಾಡಿದ್ರೂ ಈ ವಿಶ್ಯದಲ್ಲಿ ಒಂದೇ. ಮಗಳನ್ನು ಬಿಟ್ ಹೋಗೋ ಪ್ಲಾನೂ ಇತ್ತು ಅನ್ನಿ . ಬಜೆಟ್ಟೂ, ಬಫೆಟ್ಟೂ ಎಲ್ಲಾ ಅಳೆದು ಸುರಿದು ಲೆಕ್ಕಹಾಕಿ ಕೊನೆಗೆ ಡಿಸೈಡ್ ಮಾಡಿದ್ದು ’ಸಿಂಗಪೂರ್’ . ಅದೇನೋ ಡಿಗ್ರಿಲಿರೋವಾಗ ನಾಗೇಶ್ ಹೆಗ್ಡೆಯವರ ಗಗನ ಸಖಿಯರ ಸೆರಗು ಹಿಡಿದು ಓದಿದಲ್ಲಿಂದ, ಸಿಂಗಪೂರ್, ಅಲ್ಲಿನ ಲೀ ಚೇನ್, ಥಳ ಥಳ ಹೊಳೆಯುವ ಅಲ್ಲಿನ ಧೂಳಿಲ್ಲದ ರಸ್ತೆಗಳು, ಸಿಂಗರಿಸಿಟ್ಟ ಹೂಕುಂಡಗಳ ಚಾಂಘೀ ಏರ್ಪೋರ್ಟ್.. ತಲೆಯಲ್ಲೊಂದು ರಮ್ಯ ಚಿತ್ರವಿತ್ತು. ಅಲ್ಲೊಂದು ಅಪರೂಪದ ಆರ್ಕಿಡ್ ವನವನ್ನು ನೋಡುವುದಿತ್ತು. ವ್ಹಿಸ್ಲ್ ಹಾಕಿದೊಡನೆ ಹಾರಿ ಕೈಮೇಲೆ ಕೂರುವ ಹಕ್ಕಿಗಳ ಹಿಂಡು ಸತ್ಯವ ಅಂತ ಬೇಕಾಗಿತ್ತು. ನೀರುಗುಳುವ ನೀರುಸಿಂಹ, ಬಿಲ್ಡಿಂಗ್ ಮೇಲಿರೋ ಸ್ವಿಮಿಂಗ್ಫ಼ೂಲ್, ಸಂಗೀತಕ್ಕೆ ಸರಿಯಾಗಿ ಬೆಳಕು ಕುಣಿಸೋ ಮರಗಳು …ಎಷ್ಟೊಂದು ನೋಡೋದಿತ್ತು.      ಬೆಂಗಳೂರನ್ನು ಬೇರೆ ಎಸ್ಸೆಮ್ ಕೃಷ್ಣ ಅವರು ಸಿಂಗಪೂರ್ ಮಾಡೋಕೆ ಹೊರಟಿದ್ರಲ್ವ? ಒಂದ್ಸಾರಿ ಬೆಂಗಳೂರಷ್ಟೇ ವಿಸ್ತೀರ್‍ಣದ ಈ ಪುಟ್ಪುಟಾಣಿ ನಗರ-ದೇಶವನ್ನು ನೋಡೋದು ಅಂತ ಡಿಸೈಡ್ ಮಾಡಿದ್ಮೇಲೆ ಉಳಿದ ಕೆಲ್ಸ ಜಟ್ಪಟ್ ಆಗೇ ಹೋಯ್ತು. ಕಾರಣ, ಸಿಂಗಪೂರ್ ವೀಸಾ, ಯುರೋಪು ಅಥವ ಅಮೆರಿಕ ವೀಸಾದಂತಲ್ಲದೆ ಸಿಂಪಲ್ ಆಗಿತ್ತು. ಪ್ರತ್ಯಕ್ಷ ಸಂದರ್ಶನ, ಸ್ಟ್ಯಾಂಪಿಂಗ್ ಇತ್ಯಾದಿ ಇತ್ಯಾದಿ ಇರದೆ ಸರಳ ಪ್ರೊಸೆಸಿಂಗ್.  ಕಾಲೇಜು ದಿನಗಳ ಮಿತ್ರ ಹರಿ ಈಗ ಟ್ರಾವೆಲ್ ಕನ್ಸಲ್ಟೆಂಟ್ ಆಗಿರೋದ್ರಿಂದ ಅವನು ಫುಲ್ ಪ್ಲಾನ್ ಮಾಡಿದ. ಉಳಿಯೋಹೋಟೆಲ್ಲು,( ಫಾಲ್ಕ್ರುಮ) ಸೈಟ್ ಸೀಯಿಂಗು , ಯುನಿವರ್ಸಲ್ ಸ್ಟುಡಿಯೋ, ಎಲ್ಲವನ್ನೂ ಪ್ಲಾನ್ ಮಾಡಿ ಹೊರಟ್ವಿ .. ಹೊರಡುವಾಗಲೇ ವಕ್ಕರಿಸಿಕೊಂಡಿದ್ದು ವೈರಲ್ ಜ್ವರ, ಅಂತೂ ಇಂತೂ ಮಧ್ಯರಾತ್ರಿ ಹೊರಟು ಅರೆ ಎಚ್ಚರ,ಪ್ಯಾರಸಿಟಮಾಲ್ ಇಂಡ್ಯೂಸ್ಡ್ ನಿದ್ರೆಗಳ ಮಧ್ಯೆದಲ್ಲೆಲ್ಲೋ ಟೈಗರ್ ಏರ್ಲೈನ್ಸ್ ಈ ದ್ವೀಪ ರಾಷ್ಟ್ರಕ್ಕೆ ನಮ್ಮನ್ನು ತಂದಿಳಿಸಿತ್ತು.

ಲ್ಲಿ ಊರಲ್ಲಿ ಊರು ಸುತ್ತಿದ್ದು, ದಾರಿ ತಪ್ಪಿದ್ದು, ಇದೆಲ್ಲವುದರ ಬಗ್ಗೆ ಇನ್ನೊಮ್ಮೆ ಬರೀತೀನಿ. ಈಗ ಬರೆಯೋಕಿರೋದು ನಾವಿಬ್ಬರೂ ಚೈನಾ ಟೌನಿನಲ್ಲಿ ಅಲೆದ , ಒಂದಿಡೀ ಬೀದಿಯ ಬಾಣಸಿಗರನ್ನು ಫಜೀತಿಗೊಳಪಡಿಸಿದ ಕಥೆ.

ಎರಡು ದಿನ ಹೋಟೆಲ್ಲಿನ ಕೆಟ್ಟ ಕಾಂಟಿನೆಂಟಲ್ ಊಟ ಮಾಡಿ, ಹೊರಗೆ ಸಿಕ್ಕಿದ್ದನ್ನು ತಿಂದು , ಬ್ರೆಡ್ಡು ಬನ್ನು ಕೊಂಡು ಹೊಟ್ತೆ ತುಂಬಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿದ್ವಿ. ಮೂರನೆ ದಿನ ಕಳೆಯುವಷ್ಟರಲ್ಲಿ ಅನ್ನ ಸಾರು, ಕೊನೆಗೆ ಕನಿಷ್ಟ ಮ್ಯಾಗಿಯಾದರೂ ಸಿಕ್ಕಿದರೆ ಸತ್ತೇ ಹೋಗಿದ್ದ ನನ್ನ ನಾಲಿಗೆಗೆ ಇಷ್ಟು ಮರುಜನ್ಮ ಸಿಗಬಹುದೆನ್ನುವ ಆಸೆ ಮೊಳೆಯಿತು. ಸಂಜೆಯ ಹೊತ್ತಿಗೆ ಈ ಆಸೆ ಸಿಕ್ಕ ಇಂಡಿಯನ್ ಯಾರನ್ನದರೂ ತಿನ್ನುವ ಲೆವೆಲ್ಲಿಗೆ ಮುಟ್ಟಿತ್ತು. ಇದಕ್ಕೆಲ್ಲ ಕಳಶವಿಟ್ಟಂತೆ ಬೆಳಿಗ್ಗೆ ಸಿಟಿ ಟೂರ್ ಮಾಡಿಸಿದ ಚೈನೀಸ್ ಒಬ್ಬ ’ಇಲ್ಲಿ ಭಾರತೀಯರು ತುಂಬ ಕೆಳ ಮಟ್ಟದ ಕೆಲಸ ಮಾಡುತ್ತಾರೆ, ಮೋಸ್ಟ್ಲಿ ಸ್ಕಾವೆಂಜಿಂಗ್ ವರ್ಕ್, ಬೆನ್ನು ಮೂಳೆ ಮುರಿಯುವ ಕಟೋರ ದುಡಿಮೆಯನ್ನು ನಾವು ಭಾರತೀಯರ ಹತ್ತಿರ ಮಾಡಿಸಿಕೊಳ್ಳುತ್ತೀವಿ, ಇಲ್ಲಿರುವ ಲಿಟ್ಲ್ ಮನ್ ಹಟನ್( ನ್ಯೂಯಾರ್ಕ್ನ್ ಬಿಸಿನೆಸ್ ಡಿಸ್ತ್ರಿಕ್ಟ್ನಂತೆಯೇ ಇರುವ ವಿಶ್ವದ ಪ್ರಸಿದ್ದ ಬ್ಯಾಂಕುಗಳ ಕೇಂದ್ರ ಕಚೇರಿಗಳಿರುವ ಏರಿಯಾ) ನಲ್ಲಿ ಮಾತ್ರ ತುಂಬಾ ಓದಿರುವ , ತಂತ್ರಜ್ಣಾನದಲ್ಲಿ ಮುಂದಿರುವ ಚೀನೀಯರಿದ್ದೀವಿ ಅಂತೆಲ್ಲ ಹೇಳಿ ನಖಶಿಖಾಂತ ಉರಿಸಿದ್ದ. ಅಷ್ಟರಲ್ಲಾಗಲೇ ಅಮೆರಿಕದ ಉದ್ದಗಲದಲ್ಲಿ ಸುತ್ತಿ, ಭಾರತೀಯರೆಲ್ಲರೂ ಐಐಟಿಯಲ್ಲಿ ಓದಿರುವ ಅಪಾರ ಪ್ರತಿಭಾವಂತರು ಅಂತ ಅಮೆರಿಕನ್ನರು ಕೊಟ್ಟ ಗೌರವವನ್ನು ವಿನಾಕಾರಣ ಸ್ವೀಕರಿಸಿ,ಕಾಲರ್ ಮೇಲಿತ್ತಿ ಮೆರೆಯುತ್ತಿದ್ದ  ನಮಗೆ ಅವನ ವಾದ ಲಹರಿ, ಅವನು ನೋಡುತ್ತಿದ್ದ ತಿರಸ್ಕೃತ ದೃಷ್ಟಿ, ಲಿಟ್ಲ್ ಇಂಡಿಯಾ ಅನ್ನುವ ಇಂಡಿಯನ್ನರೇ ಹೆಚ್ಚಿಗೆ ಇರುವ ಜಾಗವನ್ನು ಅವನು ’ಅತ್ತಿ ಅಗ್ಗದ , ಕಳಪೆ ಮಾಲು ದೊರೆಯುವ ಸ್ಥಳ ಅಂತ ಅವನು ಪರಿಚಯಿಸಿದ ರೀತಿ, ಶರವಣ ಭ್ಹವನದಲ್ಲಿ ಏನನ್ನೂ ತಿನ್ನಲು ಬಿಡದೆ ಅವಸರಿಸಿದ ಅವನ ಕಿಡಿಗೇಡಿ ಬುದ್ದಿಯಿಂದ  ರೋಷವುಕ್ಕಿತ್ತು. ಇಲ್ಲಿ ಎಷ್ಟೇ ನಮ್ಮ ಕೊಳಕು ರಾಜಕೀಯವನ್ನು, ಅಷ್ಟೇ ಭ್ರಷ್ಟ ವಾದ ಭಾರತೀಯ ಮನಸ್ಥಿತಿಯನ್ನು ಬೈದರೂ ಹೊರಗೆ ವಿಮಾನವಿಳಿದ ಕೂಡಲೆ ಉಗ್ರ ಭಾರತ ಪ್ರೇಮಿಯಾಗುವ ನನಗೆ ಈ ಪುಟ್ಟ ಕಣ್ಣುಗಳ, ಡೊಳ್ಳು ಹೊಟ್ಟೆಯ ( ಅವನ ಯೂನಿಫಾರ್ಮಿಂದಾಚೆ ಅವನ ಹೊಟ್ಟೆ ಬಿರಿಯುತ್ತಿತ್ತು)ಕೆಟ್ಟ ಚೀನೀಯನನ್ನೆತ್ತಿ ಸಮುದ್ರಕ್ಕೆ ಒಗೆದುಬಿಡುವಷ್ಟು ಕೋಪ ಬಂದರೂ ಅವನಿಗರ್ಥವಾಗುವ ಶಿಷ್ಟ ಇಂಗ್ಲೀಷ್ ಭಾಶೆಯಲ್ಲಿ ಜಗಳವಾಡಬೇಕಿತ್ತು. ತೇಜಸ್ವಿ ಬರೆಯುತ್ತಾರೆ” ಮಾತೃಭಾಷೆಯಲ್ಲದೆ ಬೇರೆ ಭಾಶೆಯಲ್ಲಿ ಜಗಳವಾಡುವುದು ಎಷ್ಟೊಂದು ಕಷ್ಟ? ಲಿಂಗ, ವಚನ, ವ್ಯಾಕರಣ, ವಾಕ್ಯ ರಚನೆಯ ನೂರಾರು ನಿಯಮಗಳನ್ನ ನೆನಪಿನಲ್ಲಿರಿಸಿ ತಪ್ಪಿಲ್ಲದೆ ಜಗಳವಾಡುವಷ್ಟರಲ್ಲಿ, ಜಗಳದ ಮೂಲ ಕಾರಣವೇ ಮರೆತು ಹೋಗಿರತ್ತೆ ಅಂತ, ಇಲ್ಲಂತೂ ಸಮಸ್ತ ಭಾರತದ  ಮರ್ಯಾದೆ ಕಾಪಾಡುವ ಕೆಲ್ಸ ನಮ್ಮ ಹೆಗಲ ಮೇಲಿತ್ತು. ಅಪ್ಪಿ ತಪ್ಪಿಯೂ ತಪ್ಪು ಇಂಗ್ಲಿಶ್ ಮಾತಾಡಿ,ಅವನ ಮುಚ್ಚಿಯೇಹೋದ ಕಣ್ಣಲ್ಲಿ ಭಾರತೀಯರ ಮಾನ ಇನ್ನೂ ಸಣ್ಣದಾಗುವುದು ಬೇಡದ ವಿಷಯ. ನನ್ನೊಳಗಿನ ವೀರಾಗ್ರಣಿ ಓಬವ್ವ ಕಚ್ಚೆ ಸೀರೆಯಿಲ್ಲದಿದ್ದರೂ , ತೊಟ್ಟ ಜಾಕೇಟ್ಟನ್ನೆ ಬಿಚ್ಚಿ ಸೊಂಟಕ್ಕೆ ಬಿಗಿದು ಕದನಕ್ಕೆ ತಯಾರಾಗೇ ಬಿಟ್ಟಳು. . ಜಗಳವೆಂದರೇ ಮೈಲು ದೂರ ಹಾರುವ ಸದಾ ಗಾಂಧಿ,ಬುದ್ದನನ್ನು ಆವಾಹಿಸಿಕೊಂಡವರಂತೆ ವರ್ತಿಸುತ್ತಾ ಜಗಳಾಗ್ರಣಿಯಾದ ನನ್ನನ್ನು ಇರಿಟೇಟ್ ಮಾಡುತ್ತಲೇ ಇರುವ ಗಂಡನೂ ಯಾಕೋ ಅವತ್ತು ಬಹಳ ಗರಮ್ ಆಗಿದ್ದ. ಭವ್ಯ ಭಾರತದ ಮೆಲಿನ ಪ್ರೀತಿಯೋ , ಮುರುಗನ್ ಹೋಟೆಲ್ಲಿನ ಇಡ್ಲಿ ತಪ್ಪಿದ ಸಂಕಟವೋ, ಯಕಶ್ಚಿತ್ ಡುಮ್ಮ ಚೀನೀಯನೊಬ್ಬ ನಮ್ಮ ಅಸ್ಮಿತೆಯನ್ನೇ ಕೀಳುಗರೆದ ಸಂಕಟವೋ , ಅಥವಾ ನನ್ನಂತಹ ಕಲಹಪ್ರಿಯೆಯೊಂದಿಗೆ ದಶಕ ಕಳೆದ ಪ್ರಭಾವವೋ ಒಟ್ಟು ಅವನೂ ಅಂದು ನನ್ನೊಂದಿಗೆ ಕಾಲರ್ ಏರಿಸಿದ್ದ.   ಹೀಗೆ ಪತಿಪತ್ನಿಯರಿಬ್ಬರೂ, ಶುಧ್ದ ವ್ಯಾಕರಣಬದ್ದ ಶೇಕ್ಸ್ಪಿಯರ್ ಇಂಗ್ಲೀಷಲ್ಲಿ ಆ ದುರಹಂಕಾರಿ ಡುಮ್ಮಣ್ಣನ ಹತ್ತಿರ ” ನಿನ್ನ ಉದ್ಯೋಗ ದಾತರೆ ಭಾರತೀಯ ಪ್ರವಾಸಿಗಳು. ಚೀನೀಯರು ಬುದ್ದಿವಂತರು ಅನ್ನುವ ನೀನೇನು ಭಾರೀ ಕೆಲ್ಸದಲ್ಲಿದ್ದಿ? ನಾವು ಭಾರತೀಯರು ನೋಡು ಎಷ್ಟು ದುಡ್ಡು ಖರ್ಚು ಮಾಡಿ ಪ್ರವಾಸ ಮಾಡುತ್ತೇವೆ, ಜೀವನದಲ್ಲಿ ಒಮ್ಮೆಯಾದರೂ ಅಮೆರಿಕಕ್ಕೆ ಹೋಗಿದ್ದೀಯ? ಅಲ್ಲಿನ ಭಾರತೀಯರನ್ನು ನೋಡಿದ್ದೀಯ , ಸಿಲಿಕಾನ್ ವ್ಯಾಲಿಯ ಹೆಸರಾದರೂ ಗೊತ್ತುಂಟ ನಿನಗೆ? ಅಲ್ಲಿರುವವರೆಲ್ಲ ಭಾರತೀಯರು ಇತ್ಯಾದಿ ಇತ್ಯಾದಿ ಅತ್ತ ಜಗಳವೂ ಅಲ್ಲದ , ಇತ್ತ ಲೆಕ್ಚರ್ರೂ ಅಲ್ಲದ ಧಾಟಿಯಲ್ಲಿ ಒದರತೊಡಗಿದೆವು.  ಅಲ್ಲಿನ ಸೆಕೆಗೋ, ನಮ್ಮ ಲಯಬದ್ದ ವಾಕ್ಪ್ರವಾಹಕ್ಕೋ , ಅಥವಾ ಹೊರಲಾರದ ಅವನ ದೇಹ ಭಾರಕ್ಕೋ ನಮ್ಮ ಡುಮ್ಮಣ್ಣ ಬೆವರಿಳಿಸಲಾರಂಭಿಸಿದ. ಇಷ್ಟೆಲ್ಲ ನಡೆಯುತ್ತಿದ್ದರೂ ಬಸ್ಸಿನ ಮುಕ್ಕಾಲು ಪಾಲು ತುಂಬಿದ್ದ ಭಾರತೀಯ ಪ್ರವಾಸೀ ಪಡೆ ತುಟಿಕ್ಪಿಟಿಕ್ ಅಂದಿದ್ದರೆ ಕೇಳಿ. ಬಹುಶಃ ಇಂತಹ ನರಸತ್ತಂತೆ ಅವನ ಹೀಗಳಿಕೆ ಕೇಳುವ ಭ್ಃಆರತೀಯರನ್ನು ನೋಡಿಯೇ ಇವನು ಇಷ್ಟು ತಲೆಹರಟೆ ಅನ್ನುವ ತೀರ್ಮಾನಕ್ಕೆ ನಾವು ಬರಬೇಕಾಯ್ತು. ನಮ್ಮ ಮೇಲಿನ ಸಿಟ್ಟಿನಿಂದ ಅವನು ಮುಂದೊಂದೆರಡು ಕಡೆ ನಮ್ಮನ್ನು ಉದ್ದೇಶಪೂರ್ವಕವಾಗಿ , ಲೇಟ್ ಆಗಿ ಬಂದರು ಅಂತ ಬಿಟ್ಟು ಹೋಗಲೆತ್ನಿಸಿದ್ದೂ, ನಾವು ಕೊನೆಗೆ ನಿನ್ನ ಕಂಪನಿಗೆ ಫೋನು ಮಾಡಿ ರಿಟನ್ ಕಂಪ್ಲೈಂಟ್ ಕೊಡುತ್ತೇವೆ ಅಂತ ಬೆದರಿಸಿದ್ದೂ ಎಲ್ಲ ನಡೆಯಿತು.

ಒಟ್ಟಾರೆ ಸಂಜೆಯಾಗುವಷ್ಟರಲ್ಲಿ ನಮಗಿಬ್ಬರಿಗೂ ಹಸಿವು, ಸುಸ್ತು, ಭಾರತೀಯರನ್ನು ಹೀನೈಸಿದ್ದವನ ಮೇಲಿನ ಕೋಪ ಎಲ್ಲಾ ಸೇರಿಕೊಂಡು ರಜೆ ಸಜೆಯಾಗುವತ್ತ ಹೊರಳಿತ್ತು.

 

ಅದಕ್ಕೇ ಮಾಡಿದ ಪ್ಲಾನ್ ಸುಪ್ರಸಿದ್ದ ಚೈನಾ ಟೌನಿನಲ್ಲಿ ಸುತ್ತಿ ಒಂದಿಷ್ಟು ಫ಼್ರೈಡ್ ರೈಸೋ, ಶಿಜವಾನ್ ರೈಸೋ ಒಟ್ಟು ಚಿತ್ರಾನ್ನದ ಹತ್ತಿರದ ನೆಂಟರಿಷ್ಟರನ್ನು ಕಬಳಿಸಿ ಪೇಟ್ಪೂಜಾ ಮಾಡುವುದಾಗಿತ್ತು. ಖಾಲಿ ಹೊಟ್ಟೇ, ಭರ್ತಿ ಜೇಬು ( ಸಿಂಗಾಪುರ್ ಈಸ್ ನಾಟ್ ಚೀಪ್) ಬಿಸಿಯಾದ ತಲೆ ಹೊತ್ತು ನಮ್ಮ ಸವಾರಿ ಚೈನಾಟೌನಿನ ಫ್ಹುಡ್ ಸ್ಟ್ರೀಟ್ ಕಡೆ ಹೊರಟಿತ್ತು. ಮುಸ್ಸಂಜೆಗಾಗಲೇ ಅಲ್ಲಿನ ಸಾಲು ಸಾಲು ಅಂಗಡಿಗಳಲ್ಲಿ ನಿಯಾನ್ ದೀಪಗಳ ಜಗಮಗ. ನಮ್ಮ ಜನಪಥ್ ಅಂಗಡಿಗಳಂತೆ ಮಧ್ಯದಲ್ಲಿ ಬೇರ್ಪಡಿಸುವುದಕ್ಕೇನೂ ಇಲ್ಲದ ಸಾಲು ಸಾಲು ಅಂಗಡಿಗಳು ಐ ಮೀನ್ ಈಟರಿಗಳು. ಯಾವ ಅಂಗಡಿ ಎಲ್ಲಿ ಶುರುವಾಗುತ್ತಿತ್ತೋ, ಎಲ್ಲಿ ಮುಗಿಯುತ್ತಿತ್ತೋ ಯಾವನಿಗೂ ಅರ್ಥವಾಗುವಂತಿರಲಿಲ್ಲ. ಅಲ್ಲಿರುವ ಹದಿಹರೆಯದ ಎಲ್ಲಾ ಬಾಣಸಿಗರೂ , ಸರ್ವರ್ರೂಗಳೂ ಏಕಪ್ರಕಾರವಾಗಿ ಒಬ್ಬರನ್ನೊಬ್ಬರು  ಹೋಲುತ್ತಿದ್ದರು. ಫ್ಯಾಕ್ಟರಿಯ ಅಸೆಂಬ್ಲಿ ಲೈನಿನಂತೆ ಕಂಡುಬರುವ ಚೈನೀಸ್ ಮುಖಗಳನ್ನು ಅವರ ಅಪ್ಪ ಅಮ್ಮ, ಪ್ರೇಯಸಿಯರು ಹೇಗೆ ಗುರುತು ಹಿಡಿಯುತ್ತಾರೋ ಆ ಕನ್ಫ಼್ಫ್ಹ್ಯೂಷಿಯಸ್ಸನೇ ಬಲ್ಲ.

ಆ ಬೀದಿಗಳಲ್ಲೆಲ್ಲ ಹದಿಹರೆಯದವರದ್ದೇ ಹಾರಾಟ.  ಅದ್ಯಾವುದೋ ಟೈಗರ್ ಹೆಸರಿನ ಬಿಯರ್ ಬಾಟಲಿಗಳ ಮುಂದೆ ಹಿಂಡು ಹಿಂಡು ಹುಡುಗರು. ಅವರು ತಿನ್ನುತ್ತಿದ್ದಿದ್ದೋ ಆರು ಕಾಲು, ಎಂಟು ಕಾಲು , ಹದಿನಾರು ಕಾಲು ,ರೆಕ್ಕೆ ಪುಕ್ಕ, ಕೋರೆ ಹಲ್ಲು ಇತ್ಯಾದಿ ಇತ್ಯಾದಿ ಸಮಸ್ತ ಪ್ರ್‍ಆಣಿ ಜನಾಂಗವನ್ನೇ ಅಲ್ಲಿ ಹುರಿದು,ಕೊಚ್ಚಿ, ಬೇಯಿಸಿ ,ಕರಿದು ತೂಗು ಹಾಕಿದಂತಿತ್ತು. ಕೇವಲ ಪುಸ್ತಕಗಳಲ್ಲಿ ಓದಿದ್ದ, ಅಪರೂಪಕ್ಕೆ ಸಿನೆಮಗಳಲ್ಲಿ ನೋಡಿದ್ದ ಅಷ್ಟ್ಟೂ ವಿಧದ ಪ್ರಾಣಿಗಳು ಅಲ್ಲಿ ತಟ್ಟೆಗಳಲ್ಲಿಇರಿಸಲ್ಪಟ್ಟಿದ್ದವು. ಎರೆಹುಳಗಳೂ, ಯಾವುದೋ ದೊಡ್ದ ಜಾತಿಯ ಇರುವೆಗಳೂ, ಏಡಿ-ಚೇಳು,ಕಪ್ಪೆ, ಹಾವು ..ಉಹೂಂ ಯಾವುದೂ ವರ್ಜ್ಯವಲ್ಲ. ಅಂತೂ ಇದ್ದಿದ್ದರಲ್ಲಿ ಪ್ರಾಣಿಗಳನ್ನು ತೂಗುಹಾಕಿಲ್ಲ ಅನ್ನಿಸಿದ್ದ ಅಂಗಡಿಯೊಂದರ ಮುಂದೆ ಇಬ್ಬರೂ ಸುಸ್ತಾಗಿ ಕುಕ್ಕರಿಸಿದೆವು.

ಯೆಸ್ ಯೆಸ್ ಸರ್, ನೋ ಸರ್, ವಿ ದೋಂತ್ ಹೇವ್ ಸರ್ ಅಷ್ಟೇ ಇಂಗ್ಲಿಷು ಅಲ್ಲಿನ ಹುಡುಗರಿಗೆ ಬರುತ್ತಿದ್ದಿದ್ದು. ನಮಗೆಂದೇ ಬಣ್ಣ ಬಣ್ಣದ ಚಿತ್ರ ವಿಚಿತ್ರ ಸ್ಥಿತಿಯಲ್ಲಿರುವ ಪ್ರಾಣಿ ಪಕ್ಶಿಗಳ ಮೆನು ನೀಡಿದರು. ಅದರಲ್ಲೇನಿದೆ ಮಣ್ಣು? ಇರುವ ಮುಕ್ಕಾಲು ಐಟಮ್ಸ್ ಮುಂದೆ ಚಿತ್ರಗಳಷ್ಟ್ಯೆ ಕಾಣುತ್ತಿದ್ದಿದ್ದು. ಕಾರಣ ಎಲ್ಲಾ ಮೆನುಗಳೂ ಚೈನೀಸ್ಮಯ. ತಲೆ ಕೆಟ್ಟು ಹೋಗಿ ನೋ ಚೈನೀಸ್ , ಓನ್ಲಿ ಇಂಗ್ಲಿಷ್ ಅಂತ ಸಾಭಿನಯವಾಗಿ ಒದರಿದೆವು . ಅವಕ್ಕೇನು ತಿಳಿಯಿತೋ ಕೈಯ್ಯಲ್ಲಾಡಿಸಿ ಒಕೆ ಒಕೆ ನೋ ಇಂಗ್ಲೀಷ್ ನೋ ಚೈನೀಸ್ ಅಂತ ಆ ಮೆನು ಕಾರ್ಡ್ ಮೆಲೆ ಬೆರಳಿಡಲಾರಂಭಿಸಿದರು. ನಮ್ಮ ಈ ಅಭಿನಯಾವಳಿ ಇನ್ನೆಷ್ಟು ಹೊತ್ತು ನಡೆಯುತ್ತಿತ್ತೋ, ಪಕ್ಕದ ಟೇಬಲ್ಲಿನಲ್ಲಿ ತಮಾಶೆ ನೋಡುತ್ತಾ ಕುಳಿತಿದ್ದ ಹುಡುಗನೊಬ್ಬ ಎದ್ದು ಬಂದ. ಅಲ್ಪ ಸ್ವಲ್ಪ ಇಂಗ್ಲಿಶ್ ಗೊತ್ತಿದ್ದ ಅವನಿಗೆ ನಮ್ಮ ಫಜೀತಿ ಹೇಳಿದೆವು . ಒಂದೇ ಶಬ್ದ…ಓನ್ಲಿ ವೆಜ್..ಕೇಳಿದ್ದೇ ತಡ ಅವನ ಪುಟ್ಟ ಕಣ್ಣುಗಳು ಒಡೆದು ಹೋಗುವಷ್ಜ್ಟು ದೊಡ್ಡವಾದವು. ಓನ್;ಲಿ ವೆಜ್ ಅಂತ ಜೋರಾಗಿ ಉದ್ಗಾರವೆತ್ತಿ ಅವನು ನೋಡಿದ್ದೇ ತಡ, ಆ ಇಡೀ ಬೀದಿಯಲ್ಲಿ ಸಂಚಲನವೇರ್ಪಟ್ಟಿತ್ತು. ಅವನ ಜತೆಯ ಹುಡುಗರು , ಇನ್ನೂ ಕೆಲವು ಹೋಟೆಲ್ಲಿನವರು ಎಲ್ಲರೂ ಓನ್ಲಿ ವೆಜ್ ಓನ್ಲಿ ವೆಜ್ ಅನ್ನುತ್ತಾ ನಮ್ಮ ಟೇಬಲ್ ಬಳಿ ನೆರೆದರು. ಅವರ ಕಣ್ಣಿಗೆ ಓನ್ಲಿ ವೆಜ್ ತಿನ್ನುವ ನಾವೂ ತಿನ್ನಬಹುದಾದ ಪ್ರಾಣಿಗಳ ಥರ ಕಂಡೆವಿರಬೇಕು. ಅಂತೂ ಕ್ಷಣ ಕ್ಷಣಕ್ಕೂ ನಮ್ಮ ಟೇಬಲ್ ಸುತ್ತ ಸಂದಣಿ ಹೆಚ್ಚಿ ಅವರವರಲ್ಲೇ ಕ್ವಿನ್ಚೈನ್ಕುನ್ ಅಂತೆಲ್ಲ ಮೆನು ನೋಡುತ್ತಾ , ಪಕ್ಕದ ಹೋಟೆಲ್ಲಿನ ಮೆನು ತರಲು ಇನ್ನೊಬ್ಬನನ್ನು ಓಡಿಸುತ್ತ ಚರ್ಚಿಸಲಾರಂಭಿಸಿದರು. ನಮಗಂತೂ ಇವರೆಲ್ಲಾ ಸೇರಿ ನಮ್ಮನ್ನೇ ಅಡುಗೆ ಮಾಡಿ ತಿನ್ನುವ ಪ್ಲಾನ್ ಮಾಡುತ್ತಿದ್ದರ್ ಅನ್ನುವ ಅನುಮಾನ, ಹಾಗೆಲ್ಲ ದುಂಡದುಂಡಗಿರುವ ನನ್ನನ್ನು ಕರಿದು ತೂಗುಹಾಕಿದರೆ ..ಇಷ್ಷೀ ..ಒಟ್ಟಲ್ಲಿ ಲಂಗುಲಗಾಮಿಲ್ಲದೆ ಹೋಗುತ್ತಿದ್ದ ಲಹರಿಯನ್ನು ತಡೆದು, ಡವಗುಟ್ಟಿದ ಎದೆಗೆ ಆಲ್ ಈಸ್ ವೆಲ್ ಅನ್ನುವ ಸುಳ್ಳೇ ಸಮಜಾಯಿಷಿ ನೀಡಿ ಮೈಯ್ಯೆಲ್ಲಾ ಕಣ್ಣಾಗಿ. ಐ ಮೀನ್ ಕಿವಿಯಾಗಿ ಕಣ್ಣು ಬಾಯಿ ಬಿಟ್ಟು ಮ್ಯಾಂಡರೀನ್ ಮನುಷ್ಯರನ್ನು ನಿರುಕಿಸಲಾರಂಭ್ಹಿಸಿದೆವು. ಕೊನೆಗೆ ಅವರಲ್ಲೇ ಒಬ್ಬ ನಾಯಕತ್ವ ವಹಿಸಿಕೊಂಡು ನಮಗೆ ಬೆರಳಿಟ್ಟು ಅರೆಬರೆ ಇಂ ಗ್ಲಿಶಿನಲ್ಲಿ ವಿವರಿಸಲಾರಂಭಿಸಿದ , ಮೀನಿನಂತೆ ಕಾಣುತ್ತಿದ್ದ ಎಂತದೋ ತಿನಿಸಿನ ಮೇಲೆ ಬೆರಳಿಟ್ಟು ದಿಸೀಸ್ ವೆಜ್ ಅಂದ. ಇವರಿಗೀಗ ಬಯಾಲಜಿ ಪಾಠವನ್ನೂ ಮಾಡಬೇಕಲ್ಲ ಅಂತ ಗಂಡ ಊಹೂ ಫ್ಹಿಶ್ ಈಸ್ ನಾಟ್ ವೆಜ್ ಅಂತ ವಿವರಿಸಲಾರಂಭಿಸಿದ. ಮತ್ತೊಬ್ಬನಿಗೆ ಉತ್ಸಾಹವುಕ್ಕಿ ಫುಲ್ ಬೀನ್ಸ್ ಕಾಳುಗಳ ಬೌಲ್ ತೋರಿಸಿ ದಿಸ್ ಒನ್ ಈಸ್ ವೆಜ್ ಅಂದ, ಅದರಲ್ಲಂತೂ ಬೀನ್ಸ್ ಕಾಳುಗಳ ಮಧ್ಯೆ ಇಣುಕುತ್ತಿದ್ದ ಏಡಿ ಕಾಲು ನೋಡಿ ನನಗೆ ಹೊಟ್ಟೆ ತೊಳೆಸಲಾರಂಭಿಸಿತು. ಅಷ್ಟರಲ್ಲೊಬ್ಬ ಅವನ ಹೋಟೆಲ್ಲಿಂದ ಅದೆಂತದ್ದೋ ದೋಸೆಯಂತೆ ಕಾಣುವ ವಸ್ತುವನ್ನೂ ,ಪಕ್ಕದಲ್ಲಿಷ್ಟು ಇನ್ನೂ ಮಿಸುಕುವಂತಿದ್ದ ಆಕ್ಟೋಪಸ್ಸನ್ನೂ ಇಟ್ಟುಕೊಂಡು ಬಂದೇ ಬಿಟ್ಟ. ಅವನು ಬಂದ ಸ್ಟೈಲಲ್ಲಿ ಎಲ್ಲಿ ಸರ್ವ ಮಾಡಿ ತಿನ್ನು ಅನ್ನುತ್ತಾನೋ ಅಂತ ನಾನು ಕುರ್ಚಿಯನ್ನೇ ಬಿಟ್ಟು ಎದ್ದೆ. ಮತ್ತೊಬ್ಬ ತಟ್ಟೆತುಂಬಾ ಬಣ್ಣದ ಅನ್ನ ತುಂಬಿಸಿ ಪ್ಯೂರ್ ವೆಜ್ಜು, ಓನ್ಲಿ ಚಿಕನ್ ಅನ್ನಲಾರಂಭಿಸಿದ. ಅಂತೂ ಅವರೆಲ್ಲ ಸೇರಿ , ಅವರ ಬೀದಿಗೆ ಬಂದ ನಮಗೆ ಏನಾದರೂ ತಿನ್ನಿಸಿಯೇ ಬಿಡುವ ತೀರ್ಮಾನಕ್ಕೆ ಬಂದಿದ್ದರು. ಚಿತ್ರಾನ್ನ ತಿನ್ನಲು ಬಯಸಿದವರಿಗೆ ಕೊನೆಗೆ ಅನ್ನವೂ ಸಿಗುವ ಲಕ್ಷಣಗಳಿಲ್ಲ ಅಂತ ಅರಿವಾಗಿ, ಇವತ್ತೂ ಬ್ರೆಡ್ಡೇ ಗತಿ ಅಂದುಕೊಂಡು, ಪರಿಸ್ಥಿತಿ ಕೈಮೀರಿ ಈ ಚೀನೀಹುಡುಗರು ನಮ್ಮನ್ನು ಹಿಡಿದು ಓನ್ಲಿ ವೆಜ್ಜು ಅಂತ ಯಾವ್ಯಾವುದೋ ಪ್ರಾಣಿಗಳ ಅಂಗಾಂಗಳನ್ನು ಬಾಯಿಗೆ ತುರುಕುವ ಮೊದಲೇ ಹೊರಡುವುದು ವಾಸಿ ಅಂದುಕೊಂಡು ಅವರಿಗೆಲ್ಲ ನೋ ಥ್ಯಾಂಕ್ಸ್ ಅಂತ ಹೇಳಿ ಹೊರಡಲು ಅನುವಾದೆವು .

ಏನನ್ನೂ ತಿನ್ನದೆ, ಹಸಿದಂತಿದ್ದ ನಮ್ಮ ಬಾಡಿದ ಮುಖಗಳನ್ನು ನೋಡಿ ಅವರಿಗೇನನ್ನಿಸಿತೋ ಬೀನ್ಸ್ ಚಿತ್ರ, ಚೀನಿಕಾಯಿ ಚಿತ್ರ ತೋರಿಸಿ ಈದ್ ದಿಸ್ ವೆಜ್ಅಂತ ಕೇಳಿದರು. ಕಕ್ಕಾಬಿಕ್ಕಿಯಾಗಿ ಹೂ ಅಂದ್ ಕೂಡಲೆ, ಸಿತ್ ಸಿತ್ ಅಂತ ನಮ್ಮನ್ನೆಳೆದು ಕೂರಿಸಿ ಅವರವರೆ ಕಿಚಿಪಿಚಿ ಮಾತಾಡಿ, ಹೊರಟರು. ತಲೆಬುಡ ತಿಳಿಯದ ನಾವು ಅಕ್ಕಪಕ್ಕದಲ್ಲಿ ಪ್ರಾಣಿ ಸಂಕುಲವನ್ನು ಕಬಳಿಸುತ್ತಿದ್ದ ಬಕಾಸುರರನ್ನು ನೋಡುತ್ತಿರುವಾಗಲೇ, ನಮ್ಮ ಮುಂದೆ ದೊಡ್ಡದೊಂದು ತಟ್ಟೆಯಲ್ಲಿ ಇಡಿ ಇಡಿ ಕರಿದ ಬೀನ್ಸ್ಗಳ ರಾಶಿ ಬಂತು. ತ್ಂದವನ ಮುಖದಲ್ಲೊಂದು ದೊಡ್ಡ ನಗೆ ..ಅದರ ಮೇಲಿಷ್ಟು ಫ್ರೆಂಚ್ ಫ್ರೈಗೆ ಉದುರಿಸುವಂತೆ ಉಪ್ಪುದುರಿಸಿ ಈತ್,ಈತ್,ಓನ್ಲಿ ವೆಜ್ಜ್ ಅಂದ. ಜೀವನದಲ್ಲೇ ಇಡಿಯ ಬೀನ್ಸ್ ಅನ್ನು  ಬಾಳಕ ದ ಮೆಣಸಂತೆ ಕರಿದದ್ದು ಗೊತ್ತಿಲ್ಲದ ನನಗೆ ಬೀನ್ಸೆಂದರೆ ಹೆಚ್ಚಲೇ ಬೇಕಾದ ತರಕಾರಿ ಅಂದುಕೊಂಡಿದ್ದಕ್ಕೆ ನಗು ಬ್ಂತು. ಇದಕ್ಕೆ ಒಗ್ಗರಣೆ ಇತ್ಯಾದಿ ಹಾಕಿ ಇಡೀ ಪಲ್ಯ ಮಾಡುವ,ಮಾವ ಅಪ್ಪನಿಗೆ ಬಡಿಸಿ ಮಜ ನೋಡುವ  ತುಂಟ ಆಲೋಚನೆಯೂ ಮೂಡಿತು. ನಾವು ತಿನ್ನುವುದಿಲ್ಲವೇನೋ ಅನ್ನುವ ಅನುಮಾನದಲ್ಲೇ ನಿಂತವನಿಗೆ ನಾವಿಬ್ಬರೂ ಒಂದೊಂದು ಬೀನ್ಸ್ ಎತ್ತಿ ಕಚ್ಚಿದ್ದು ನೋಡಿ ನೆಮ್ಮದಿ ಯಾಯ್ತು. ನಗುವುದೋ ಅಳುವುದೋ ಗೊತ್ತಿಲ್ಲದೆ ನಾವಿಬ್ಬರೂ ಮುಖ ಮುಖ ನೋಡುತ್ತಾ ಉಪ್ಪು ಸವರಿದ ಬೀನ್ಸ್ ತಿನ್ನುವಾಗಲೇ ಪಕ್ಕದ ಹೋಟೆಲ್ಲಿನವನು ದೊಡ್ದ ತಟ್ಟೆಯ ತುಂಬಾ ಚೀನಿಕಾಯಿಯ ಹೋಳು ತುಂಬಿಕೊಂಡು ಬಂದ. ಕಾರ್ನ್ಳೋರಿನಲ್ಲಿ ಅದ್ದಿ ಬೋಂಡದಂತೆ ಕರಿದಿದ್ದ ಹೋಳುಗಳನ್ನದ್ದಲು ದೊಡ್ದ ಬೌಲ್ ತುಂಬಾ ಸಾಸ್ ಬೇರೆ. ಹಸಿದಿದ್ದ ನಮಗೆ , ಏನಾದರೂ ವೆಜ್ಜು ತಿನ್ನಿಸಲೇಬೇಕೆನ್ನುವ ಕಾಳಜಿಗೆ ಮನಸ್ಸು ತುಂಬಿ ನಮ್ಮ ಕೈಯ್ಯಲಾದಷ್ಟು ಬೀನ್ಸು, ಮತ್ತು ಬೋಂಡ ತಿಂದೆವು. ಬಿಲ್ಲು ಕೊಡುವಾಗಲೂ ಅದೇನೋ ಕಿಚಪಿಚ ಅನ್ನುತ್ತಾ ಯುಹ್ಯಾವ್ಂತ್ ಈತನ್ ಎನಿತಿಂಗ್ ಅನ್ನುತ್ತಲೇ, ಮುಜುಗರದಿಂದಲೇ ಹಣ ತೆಗೆದುಕೊಂಡ ಸಣ್ಣ ಕಣ್ಣಿನ ಚೈನೀಸ್ ಹುಡುಗ ಬೆಳಗಿನ ಕಹಿಯನ್ನೆಲ್ಲ ತೊಳೆಯುವಂತೆ ನಕ್ಕುಬಿಟ್ಟ.

ಪ್ರಪಂಚದೆಲ್ಲೆಡೆ ಕೆಟ್ಟವರೂ, ಒಳ್ಳೆಯವರೂ, ರೇಸಿಸ್ಟುಗಳೂ, ಪಾಪಿಷ್ಟರೂ, ಹಸಿದವರಿಗೆ ಹೊಟ್ಟೆ ತುಂಬಿಸುವವರೂ , ಹಣ ಹೀರುವವರೂ ಇರುತ್ತಾರೆ ಅನ್ನುವ ಸತ್ಯ ಮತ್ತೊಮ್ಮೆ ಅರಿವಾಗಿ, ಸಕಲ ಪ್ರಾಣಿಗಳೂ ತನಗೆ ಆಹಾರವಾಗಲೆಂದೇ ಜನ್ಮವೆತ್ತಿವೆ ಅನ್ನುವ ನಂಬಿಕೆಯ ಮಲೆನಾಡ ಮಿತ್ರನೊಬ್ಬ ಇಲ್ಲಿ ಬಂದರೆ ಹೇಗಿರುತ್ತದೆ ಅಂದುಕೊಳ್ಳುತ್ತಾ ಚೈನಾ ಟೌನ್ ಬಿಟ್ಟೆವು.

Comments are closed.